By signing in you confirm you are 18 or older, or have your parent’s or guardian’s consent.

CTET 8 Feb 2026 Paper 1 Kannada, Question 94

Topic: Vocabulary

Passage

ನಿರ್ದೇಶನ : ಈ ಕೆಳಗಿನ ಲೇಖನ ಭಾಗವನ್ನು ಓದಿ, ಅನುಸರಿಸಿ ಬರುವ ಪ್ರಶ್ನೆಗಳಿಗೆ (ಪ್ರಶ್ನೆ ಸಂಖ್ಯೆ : 91-99) ಸೂಕ್ತ ಉತ್ತರವನ್ನು ಆರಿಸುವುದರ ಮೂಲಕ ಉತ್ತರಿಸಿ.
ಮುಮ್ಮಡಿ ಕೃಷ್ಣರಾಜ ಒಡೆಯರ ಚರಿತ್ರೆಯೊಂದಿಗೆ ಗಾಢವಾಗಿ ತಳುಕು ಹಾಕಿಕೊಂಡ ಹೆಸರು ‘ಬಕ್ಷಿ ತಿಪ್ಪಯ್ಯ’ನವರದು. ಒಡೆಯರು ಶಿಶುವಾಗಿದ್ದಾಗ ಅವರನ್ನು ಸಂರಕ್ಷಿಸಿದ್ದು, ಬೆಳೆಸಿದ್ದು, ಅವರು ಸಿಂಹಾಸನಾಧೀಶರಾದಾಗ ಬೆನ್ನೆಲುಬಾಗಿ ನಿಂತದ್ದು ತಿಪ್ಪಯ್ಯನವರ ವಂಶ ಚರಿತ್ರೆಯಲ್ಲಿ ಮುಖ್ಯವಾಗಿ ಕಾಣುವ ಸಂಗತಿ. ಅಂಥ ಐತಿಹಾಸಿಕ ವಂಶದಲ್ಲಿ ಬಂದವರು ಎಸ್.ಆರ್. ವೆಂಕಟರಾಮಯ್ಯನವರು.
ಸಂಕೇತಿ ಸಮುದಾಯವು ನಗರವಾಸಕ್ಕೆ ತೊಡಗಿಕೊಂಡದ್ದು ಮತ್ತು ಆಧುನಿಕ ವಿದ್ಯಾಭ್ಯಾಸಕ್ಕೆ ತೆರೆದುಕೊಂಡದ್ದು ಬಹಳ ನಿಧಾನವಾಗಿ. ಆದರೆ ಅಂಚೆ ಬಕ್ಷಿ ತಿಪ್ಪಯ್ಯನವರದು ಆಧುನಿಕತೆಗೆ ಬೇಗ ಪ್ರವೇಶಿಸಿದ ಕೆಲವೇ ಸಂಕೇತಿ ಮನೆತನಗಳಲ್ಲಿ ಒಂದು.
ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿಯೂ ತಿಪ್ಪಯ್ಯನವರು ಸಚಿವರಾಗಿದ್ದರು. ಮತಾಂತರ ಪ್ರವೃತ್ತಿಯ ದೌರ್ಬಲ್ಯವಿದ್ದ ಟಿಪ್ಪು ಆಗಾಗ ಹಿಂದೂ ಅಧಿಕಾರಿಗಳಿಗೆ ಕಿರುಕುಳ ಕೊಡುತ್ತಿದ್ದ. ತಮ್ಮ ಪ್ರಾಮಾಣಿಕತೆ, ಬುದ್ಧಿ ಸಾಮರ್ಥ್ಯ. ಕರ್ತೃತ್ವಶೀಲತೆಯಿಂದಲೇ ಈ ಉಪಟಳಗಳಿಂದ ಪಾರಾಗಬೇಕಾಗಿತ್ತು. ಸಂಸ್ಥಾನವು ಎದುರಿಸಿದ ಲೆಕ್ಕ ಪತ್ರಗಳ ಬಿಕ್ಕಟ್ಟೊಂದನ್ನು ಪರಿಹರಿಸಬೇಕಾದ ಜವಾಬ್ದಾರಿಯನ್ನು ಒಮ್ಮೆ ತಿಪ್ಪಯ್ಯನವರಿಗೆ ವಹಿಸಲಾಯಿತು. ಉನ್ನತ ಮುಸಲ್ಮಾನ ಅಧಿಕಾರಿಗಳ ಸುತ್ತ ಹೆಣೆದುಕೊಂಡಿದ್ದ ಈ ಹಗರಣವನ್ನು ಉಪಾಯವಾಗಿ ಕೊನೆಮುಟ್ಟಿಸಬೇಕಾಗಿತ್ತು. ಯಾವ ಮಗ್ಗುಲಿಗೆ ವಾಲಿದರೂ ಕತ್ತಿಯ ಮೊನೆಯ ಅಪಾಯ ಇದ್ದೇ ಇತ್ತು. ಅಂಥ ಸಂದರ್ಭದಲ್ಲಿ ತಿಪ್ಪಯ್ಯನವರು ಶ್ರೀರಂಗಪಟ್ಟಣದ ರಂಗನಾಥನ ಮೊರೆ ಹೊಕ್ಕರು. ಈ ಸಮಸ್ಯೆ ಯಶಸ್ವಿಯಾಗಿ ಬಗೆಹರಿದರೆ ಸ್ವಾಮಿಗೆ ಪುಷ್ಪ ಬೃಂದಾವನೋತ್ಸವ ನಡೆಸುವುದಾಗಿ ಹರಕೆ ಹೊತ್ತರು; ಟಿಪ್ಪು ಮೆಚ್ಚುವ ರೀತಿಯಲ್ಲಿ ಸಮಸ್ಯೆಗೆ ತೆರೆ ಎಳೆದರು; ಎಲ್ಲ ಬಣದ ಮುಸಲ್ಮಾನ ಅಧಿಕಾರಿಗಳೂ ಅನಿವಾರ್ಯವಾಗಿ ಒಪ್ಪಿ ತಟಸ್ಥರಾಗುವಂತೆ ಈ ಸೂಕ್ಷ್ಮ ಕೆಲಸವನ್ನು ನಿರ್ವಹಿಸಿದರು. ತಿಪ್ಪಯ್ಯನವರು ಸನ್ಮಾನಿತರಾದರು. ಅದು ಉತ್ಥಾನ ದ್ವಾದಶಿಯ ದಿನ. ಅಂದೇ ಪುಷ್ಪ ಬೃಂದಾವನೋತ್ಸವವನ್ನೂ ಪ್ರಾರಂಭಿಸಿದರು. ಅದು ಆ ಮನೆತನದವರೇ ನಡೆಸುವ ವಾರ್ಷಿಕ ಉತ್ಸವವಾಗಿ ಮುಂದುವರಿಯಿತು.
ಬಕ್ಷಿ ತಿಪ್ಪಯ್ಯನವರಿಗೆ (ಈಗಿನ) ಹಾಸನ ಜಿಲ್ಲೆಯಲ್ಲಿ ಹಲವು ಇನಾಂ ಗ್ರಾಮಗಳಿದ್ದವು. ಅಲ್ಲಿ ಬೆಳೆದಿರುತ್ತಿದ್ದ ಗಂಧದ ಮರಗಳನ್ನು ಕೊಂಡು ಸರ್ಕಾರ ಹಣ ಕೊಡುತ್ತಿತ್ತು. ಹಾಗೆ ಬಂದ ‘ಗಂಧದ ಹಣ’ ದಿಂದ ಈ ಉತ್ಸವ ಅನೂಚಾನವಾಗಿ ನಡೆದುಕೊಂಡು ಹೋಗಬೇಕೆಂದು ತಿಪ್ಪಯ್ಯನವರು ‘ವಿಲ್’ ಬರೆದಿಟ್ಟರು. ಅದರಂತೆ ಅದು ತಲೆಮಾರುಗಳನ್ನು ದಾಟಿ ನಡೆದುಕೊಂಡು ಬಂತು. ಮುಂದೆ ಇನಾಂ ಪದ್ಧತಿ ರದ್ದು ಆಯಿತು. ಈ ವಂಶದವರು ಹಲವು ಕಡೆ ಚದುರಿದ್ದರು. ಉತ್ಸವವೂ ನಿಂತಿತು. ಇಂಥ ಸಂದರ್ಭದಲ್ಲಿ ಒಮ್ಮೆ ಸಬ್‌ಓವರ್‌ಸೀಯರ್ ಟಿ. ರಂಗಸ್ವಾಮಯ್ಯನವರು ಶ್ರೀರಂಗಪಟ್ಟಣಕ್ಕೆ ವರ್ಗವಾಗಿ ಬಂದರು. ರಾಮನಾಥಪುರ, ಕಟ್ಟೆಪುರದ ನಾಲೆ ಕಾಮಗಾರಿಯನ್ನು ನಿರ್ವಹಿಸಿ ಜನಪ್ರಿಯರಾಗಿದ್ದವರು ಅವರು. ಈ ಉತ್ಸವವನ್ನು ಮುಂದುವರೆಸಬೇಕೆಂಬ ಪ್ರೇರಣೆಯಾಯಿತು; ಮತ್ತೆ ನಡೆಸತೊಡಗಿದರು. ಅವರ ಮಗ ಎಸ್.ಆರ್. ವೆಂಕಟರಾಮಯ್ಯನವರು ತಮಗೆ ನೌಕರಿ ಇಲ್ಲದಾಗಲೂ ಬಿಡದೆ ಅದನ್ನು ಮುಂದುವರೆಸಿದರು. ಮುಂದೆ ನೌಕರಿ ದೊರೆತಾಗ, ‘ಕೆಲಸ ಇಲ್ಲದಾಗಲೂ ಉತ್ಸವ ಮಾಡಿಸಿದ್ದೆ; ದೇವರು ಈಗ ಕೆಲಸ ಕೊಡಿಸಿದ್ದಾನೆ; ಈಗ ಬಿಡುವುದುಂಟೆ?’ ಎಂಬ ಭಕ್ತಿ ವಿಶೇಷದಿಂದ ಪರಂಪರೆಯನ್ನು ಬೆಳೆಸಿದರು.
ಬಕ್ಷಿ ತಿಪ್ಪಯ್ಯನವರ ವಂಶದವರಿಗೆ ‘ಮೈಸೂರು ಮನೆಯವರು’ ಎಂಬ ನಾಮಧೇಯವಿದೆ. ಅದರ ಮೂರು ಕವಲುಗಳು ‘ಹೊಸಮನೆ’, ‘ಹಿಂದಿನ ಮನೆ’, ‘ತೊಟ್ಟಿ ಮನೆ’ ಎನಿಸಿವೆ. ವೆಂಕಟರಾಮಯ್ಯನವರು ‘ಹೊಸಮನೆ’ ಕವಲಿಗೆ ಸೇರಿದವರು. ಈ ಮೂರೂ ಕವಲುಗಳೂ ಪರ್ಯಾಯವಾಗಿ ಮೂರು ವರ್ಷಗಳಿಗೊಮ್ಮೆ ಈ ಉತ್ಸವದ ಹೊಣೆ ಹೊತ್ತು ಇಂದಿಗೂ ನಡೆಸಿಕೊಂಡು ಬರುತ್ತಿವೆ.

Q94

‘ಪರ್ಯಾಯವಾಗಿ’ ಪದದ ಅರ್ಥ :

  1. (1) ಹೆಚ್ಚುವರಿಯಾಗಿ
  2. (2) ವಿಪರೀತವಾಗಿ
  3. (3) ಹೊಸದಾಗಿ
  4. (4) ಬದಲಿಯಾಗಿCorrect answer

Solution.

CBSE answer: (4)

ಉತ್ತರ: (4) ಬದಲಿಯಾಗಿ

  1. ‘ಪರ್ಯಾಯ’ ಎಂದರೆ ಸರದಿ, ಒಂದರ ಬದಲು ಇನ್ನೊಂದು.
  2. ಗದ್ಯದಲ್ಲಿ ಮೂರು ಕವಲುಗಳು ‘ಪರ್ಯಾಯವಾಗಿ’ ಮೂರು ವರ್ಷಕ್ಕೊಮ್ಮೆ ಉತ್ಸವ ನಡೆಸುತ್ತವೆ, ಅಂದರೆ ಒಂದಾದ ಮೇಲೆ ಒಂದು ಸರದಿಯಂತೆ ಬದಲಾಗುತ್ತ.
  3. ಆದ್ದರಿಂದ ಆಯ್ಕೆಗಳಲ್ಲಿ ಹತ್ತಿರದ ಅರ್ಥ ‘ಬದಲಿಯಾಗಿ’; ಒಂದು ಕವಲಿನ ಬದಲು ಮುಂದಿನ ಸರದಿಗೆ ಇನ್ನೊಂದು ಕವಲು.

ಎಚ್ಚರಿಕೆ: ‘ಹೆಚ್ಚುವರಿಯಾಗಿ’, ‘ವಿಪರೀತವಾಗಿ’, ‘ಹೊಸದಾಗಿ’ ಇವು ಸರದಿಯ ಅರ್ಥ ಕೊಡುವುದಿಲ್ಲ.