By signing in you confirm you are 18 or older, or have your parent’s or guardian’s consent.

CTET 8 Feb 2026 Paper 1 Kannada, Question 132

Topic: Reading comprehension

Passage

ನಿರ್ದೇಶನ : ಈ ಕೆಳಗಿನ ಲೇಖನ ಭಾಗವನ್ನು ಓದಿ, ಅನುಸರಿಸಿ ಬರುವ ಪ್ರಶ್ನೆಗಳಿಗೆ (ಪ್ರಶ್ನೆ ಸಂಖ್ಯೆ : 129-135) ಸೂಕ್ತ ಉತ್ತರವನ್ನು ಆರಿಸುವುದರ ಮೂಲಕ ಉತ್ತರಿಸಿ.
ಇನ್ನೂ ಕತ್ತಲು ಪೂರ್ತಿ ಕರಗಿರಲಿಲ್ಲ, ಪಾಟೀಲರು ನಿಧಾನವಾಗಿ ಕೋಣೆಯಿಂದ ಪಡಸಾಲೆಗೆ ಬಂದು ಕುರ್ಚಿಯಲ್ಲಿ ಕುಳಿತರು. ಬದಿಯ ಟೇಬಲಿನ ಮೇಲೆ ಜೇನುತುಪ್ಪ, ನಿಂಬೇರಸ ಬೆರೆಸಿದ ಪಾನಕ ತುಂಬಿದ್ದ ತಂಬಿಗೆಯಿತ್ತು. ರೂಢಿಯಂತೆ ಎತ್ತಿಕೊಂಡು ಕುಡಿಯತೊಡಗಿದರು. ಒಂದೆರಡು ಗುಟುಕು ಕುಡಿದಿರಬೇಕು. ರುಚಿಗೆ ಮನಸ್ಸು ಉತ್ಸಾಹಗೊಂಡಿತು. ಹತ್ತಾರು ವರ್ಷಗಳಿಂದ ಆಪ್ತರಾಗಿದ್ದ ಆಯುರ್ವೇದ ವೈದ್ಯರೊಬ್ಬರು ಇಂಥ ಪಾನಕ ಕುಡಿಯಲು ಹೇಳುತ್ತಲೇ ಇದ್ದರು. ಆದರೆ ಮುಂಜಾನೆ ಎದ್ದರೆ ಸಾಕು ಮನಸ್ಸು ಚಹಾಕ್ಕೆ ಹಾತೊರೆಯುತ್ತಿತ್ತು. ಚಹ ಕುಡಿದರೆ ಮಾತ್ರ ಸಮಾಧಾನವಾಗುತ್ತಿತ್ತು. ಒಂದೆರಡು ಸಲ ಪಾನಕ ಕುಡಿಯಲು ಯತ್ನಿಸಿ ಕುಡಿದರೂ, ಪುನಃ ಚಹ ಕುಡಿಯುವ ತನಕ ಮನಸ್ಸಿಗೆ ನೆಮ್ಮದಿಯಾಗಿರಲಿಲ್ಲ! ಹೀಗಾಗಿ ಜೇನುತುಪ್ಪ ನಿಂಬೇರಸದ ಪಾನಕ ಕುಡಿಯಬೇಕೆಂಬ ಪ್ರಯತ್ನ ಕೈಬಿಟ್ಟಿದ್ದರು. ಪಾಟೀಲರು ಈ ಮನೆಗೆ ಬಂದು ಒಂದು ವಾರ ಕಳೆದಿತ್ತು. ಇಲ್ಲಿ ಪಾನಕ ಕುಡಿಯುವುದು ಅನಿವಾರ್ಯವಾಗಿ ರೂಢಿಯಾಗಿತ್ತು. ಈಗ ಪಾನಕ ಕುಡಿಯುತ್ತಿದ್ದರೆ ತನು ಮನಕ್ಕೆ ಹಿತವಾಗುತ್ತಿತ್ತು. ಪಾನಕವನ್ನು ಸವಿಯತೊಡಗಿದ್ದರು. ಕಳೆದ ಹದಿನೈದು ವರ್ಷಗಳಿಂದ ಜೀವಕ್ಕೆ ನೆಮ್ಮದಿ ಸಿಕ್ಕಿದ್ದು ಏನಾದರು ಇದ್ದರೆ ಅದು ಕಳೆದ ಈ ವಾರ–ಹತ್ತು ದಿನಗಳಲ್ಲಿ ಮಾತ್ರ ಎಂದು ಎನ್ನಿಸತೊಡಗಿತು. ಈ ಮನೆಯ ಸಿದ್ರಾಮಪ್ಪ ಮಾಸ್ತರ, ಹೆಂಡತಿ ಅಮರಮ್ಮ ದಂಪತಿಗಳು ಬದುಕುತ್ತಿರುವ ವಿಧಾನ ಕಂಡು ಪರಮಾಶ್ಚರ್ಯವಾಗಿತ್ತು. ಪಾಟೀಲರಿಗೆ. ಈ ಒಂಟಿ ಮನೆಗೆ ಬಂದ ದಿನ ರಾತ್ರಿವಾಸದ ಅನುಭವದಿಂದ, ಯಾವ ಶಿಕ್ಷೆಯ ಪರಿಣಾಮವಾಗಿ ಈ ದಂಪತಿಗಳು ಈ ರೀತಿಯಲ್ಲಿ ಜೀವಿಸುತ್ತಿದ್ದಾರೆ ಎಂದು ಅನ್ನಿಸಿ ಪಾಟೀಲರಿಗೆ ಬೇಸರವಾದದ್ದು ನಿಜ ಆದರೆ ಮೂರು ದಿನ ಕಳೆಯುವ ಹೊತ್ತಿಗೆ ‘ಆಹ್ಹಾ! ಅನ್ನಿಸಿಬಿಟ್ಟಿತು. ಮಾಸ್ತಾರರು ಕುಟುಂಬದ ಜತೆಗೆ ಮಾಡುತ್ತಿದ್ದ ನಿತ್ಯದ ಕೆಲಸಗಳನ್ನು ನೋಡುತ್ತಿದ್ದರೆ, ಮಕ್ಕಳು ಕೂಡಿಕೊಂಡು ಗಂಡ–ಹೆಂಡತಿಯ ಸಂಸಾರದ ಆಟ ಆಡುತ್ತವಲ್ಲ .... ಅದನ್ನು ಕಂಡಂತಿತ್ತು. ಮಾಸ್ತಾರರೇ ಹುಟ್ಟಿ ಬೆಳೆದ ಈ ಊರಲ್ಲಿ ಇರದೆ ಇದೇ ಊರಿನ ಹೊರಗೆ ಹೊಲದಲ್ಲಿ ಮನೆ ಕಟ್ಟಿಕೊಂಡು ಇದ್ದರು. ಹೊತ್ತು ಮುಳುಗಿದ ಬೆನ್ನಲ್ಲೇ ಉಣ್ಣುವುದು, ಉಂಡು ಕಂದೀಲು ಬೇಳಕಿನಲ್ಲಿ ಕುಳಿತು ಮಾತುಕತೆಯಾಡುವುದು, ಮನೆಯ ಹೊರಗೆ ಬೆಳದಿಂಗಳಲ್ಲಿ ಸುತ್ತಾಡಿ ಬಂದು ಮಲಗುವುದು. ಬೆಳಗಾಗುವ ಮುನ್ನವೇ ಏಳುವುದು, ಕಟ್ಟಿಕೊಂಡಿರುವ ಆಕಳು, ಅದರ ಅಂಕಣವನ್ನು ಹಸನ ಮಾಡುವುದು, ಹಾಲು ಹಿಂಡಿಕೊಳ್ಳುವುದು, ಮನೆಯ ಸುತ್ತಮುತ್ತಲಿನ ತೋಟವನ್ನು ಸುತ್ತಾಡಿ ಆರೈಕೆ ಮಾಡುವುದು, ಪಕ್ಕದ ಕಾಲುವೆಯಲ್ಲಿ ಬಟ್ಟೆಬರೆ ಒಗೆಯುವುದು ಒಂದೇ ಎರಡೇ ಇಂಥ ಹಲವು ಕೆಲಸಗಳನ್ನು ದಣಿವಿಲ್ಲದೆ, ಬೇಸರಿಸದೆ ಇಬ್ಬರು ಕೂಡಿಯೇ ಮಾಡುವುದನ್ನು ಪಾಟೀಲರು ಕಂಡು ತಾವು ಕೈ ಜೋಡಿಸಲು ಹಂಬಲಿಸಿದರು. ಮೊನ್ನೆ ಮಾಸ್ತಾರರು ಕಾಲುವೆಯಲ್ಲಿ ಬಟ್ಟೆ ಒಗೆಯುತ್ತಿದ್ದಾಗ ಹೆಂಡತಿಯ ಸೀರೆ ಬಟ್ಟೆಗಳೂ ಕಂಡು ತಡೆಯಲಾರದೆ ಪಾಟೀಲರು, ‘ಸಿದ್ರಾಮು, ಸೀರೆ ಒಗೆಯುವುದು ನಿನಗೆ ಹೇಗೆ ಸಾಧ್ಯವಾಯ್ತು ? ಅದಕ್ಕೂ ಮಾನಸಿಕ ಸಿದ್ಧತೆ ಬೇಕಲ್ಲ ? ತಪ್ಪು ತಿಳಿಯಬಾರದು.....’ ಎಂಬ ಮಾತು ಮುಗಿಯುವ ಮುನ್ನವೇ, ತಪ್ಪಾಕ ತಿಳಿಲಿ ಬಿಡು, ನಾನು ಉಡುವುದು ಪಂಜೆ, ಆಕೆ ಉಡುವುದು ಸೀರೆ, ಅವೆಲ್ಲ ಬಟ್ಟೆಗಳಲ್ಲೇನಪ್ಪ ? ಬಟ್ಟೆಗಳಂತ ಒಗಿತೀನಿ ಅಷ್ಟೆ! ಎಂದು ಮಾಸ್ತರರು ತಣ್ಣಗೆ ಅಂದಿದ್ದರು. ಮಾತು ಪಾಟೀಲರಿಗೆ ತಗುಲಿತು. ತಮ್ಮ ಹೆಂಡತಿಯನ್ನು ನೆನಪಿಸಿಕೊಂಡಿದ್ದರು. ಬಾತ್ ರೂಮಿಗೆ ಸ್ನಾನಕ್ಕೆ ಹೋದಾಗ, ಅಲ್ಲೇನಾದರೂ ಹೆಂಡತಿಯ ಬಟ್ಟೆ ಬರೆ ಕಾಣಿಸಿದರೆ ಸಿಡಿಮಿಡಿಯಾಗುತ್ತಿತ್ತು. ಅದನ್ನು ಪಾಟೀಲರು ಕಣ್ಣ ಮುಂದೆ ತಂದುಕೊಂಡರು...
“ನಿಮ್ಗ ಈ ಪಾನಕ ಬ್ಯಾಡನಿಸಿದರೆ ಬುಟ್ಟು ಬುಡ್ರಿ, ಹಾಲು ತಂದು ಕೊಡ್ತೀನಿ” ಅಂದಳು. ಅಡಿಗೆ ಮನೆಯಿಂದ ಪಡಸಾಲೆಗೆ ಬಂದ ಅಮರಮ್ಮ, ಏನನ್ನೋ ನೆನೆಯುತ್ತ ಕೈಯಲ್ಲಿ ಪಾನಕದ ತಂಬಿಗೆ ಹಿಡಿದು ಕುಳಿತಿದ್ದ ಪಾಟೀಲರನ್ನು ಅನುಮಾನಿಸಿ ಕೇಳಿದ್ದಳು.

Q132

‘ಅವೆಲ್ಲ ಬಟ್ಟೆಗಳಲ್ಲವೇನಪ್ಪ, ಬಟ್ಟೆಗಳಂತ ಒಗಿತೀನಿ’ ಈ ಮಾತು ಮತ್ತು ಕ್ರಿಯೆಯ ಹಿಂದೆ ಬರುವ ಭಾವ :

  1. (1) ಎಲ್ಲರೂ ಸಮಾನರುCorrect answer
  2. (2) ಮೇಲು ಕೀಳು ಮಾಡಬಾರದು
  3. (3) ಬಟ್ಟೆಗಳು ಒಂದೇ ರೀತಿಯವು
  4. (4) ಬಟ್ಟೆಗಳಲ್ಲಿ ವ್ಯತ್ಯಾಸವಿಲ್ಲ

Solution.

CBSE answer: (1)

ಉತ್ತರ: (1) ಎಲ್ಲರೂ ಸಮಾನರು

  1. ಪಂಜೆಯೂ ಸೀರೆಯೂ ಬಟ್ಟೆಗಳೇ ಎನ್ನುವ ಮಾಸ್ತರರ ಮಾತು ಬಟ್ಟೆಯ ಬಗ್ಗೆ ಮಾತ್ರವಲ್ಲ.
  2. ಗಂಡನ ಬಟ್ಟೆ, ಹೆಂಡತಿಯ ಬಟ್ಟೆ ಎಂಬ ಭೇದವಿಲ್ಲ ಎಂದರೆ ಗಂಡು ಹೆಣ್ಣು ಇಬ್ಬರೂ ಸಮಾನರು ಎಂಬ ಭಾವ.
  3. ಅವರ ಕ್ರಿಯೆಯೂ ಇದೇ ಸಮಾನತೆಯನ್ನು ತೋರಿಸುತ್ತದೆ.

ಎಚ್ಚರಿಕೆ: (3), (4) ಮಾತಿನ ಮೇಲ್ಮಟ್ಟದ ಅರ್ಥ ಮಾತ್ರ. (2) ಕೂಡ ಹತ್ತಿರವಿದೆ, ಆದರೆ ಮಾತಿನ ಹಿಂದಿನ ಮೂಲಭಾವ ಸಮಾನತೆ.